
ಜಯಪ್ರಕಾಶ್ ನಾರಾಯಣ ಅಪ್ಪಟ ಸಮಾಜವಾದಿ, ಗಾಂಧಿ ಹಾದಿಯಲ್ಲಿ ಮುನ್ನಡೆದ ಮಹಾ ನಿಷ್ಠಾವಂತ
ಭಾರತಕ್ಕೆ ಸ್ವಾತಂತ್ಯ್ರ ದೊರೆತ ನಂತರದ ಅಂದರೆ ಮಹಾತ್ಮಗಾಂಧೀಜಿ ಇಲ್ಲದ ಸಂದರ್ಭದಲ್ಲಿ ಅವರ ಸ್ಥಾನ -ಗೌರವವನ್ನು ಕಾಯ್ದುಕೊಂಡ ಧುರೀಣರ ಪೈಕಿ ಜಯಪ್ರಕಾಶ ನಾರಾಯಣ ಸಹ ಒಬ್ಬರು. ಇವರು ಹಸಿರು ಕ್ರಾಂತಿಯ ಹರಿಕಾರ, ಭೂದಾನ ತಂದ ಸುಧಾರಕ. ಸಮಾಜವಾದದ ಮೂಲಕ ದೇಶದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದ ಪ್ರಮುಖರು. ಖ್ಯಾತಿಯಿಂದ ದೂರವೇ ಉಳಿದು ಅಪ್ಪಟ ದೇಶಪ್ರೇಮಿ ಎನಿಸಿದವರು ಜಯಪ್ರಕಾಶ ನಾರಾಯಣರು.
ಅನ್ಯಾಯದ ವಿರುದ್ಧ ಸತತವಾಗಿ ಹೋರಾಟ ನಡೆಸಿ, ಭ್ರಷ್ಟರನ್ನು ಕಂಡಾಗ ಕೆಂಡವಾದವರು. ರಾಜಕಾರಣಿಗಳ ಸರ್ವಾಧಿಕಾರಿ ಧೋರಣೆ, ಪ್ರಜಾಪ್ರಭುತ್ವದ ಮೂಲ ಸತ್ವವನ್ನು ಹಾಳು ಮಾಡುವವರ ವಿರುದ್ಧ ನಿಷ್ಠುರವಾಗಿ ಹೋರಾಟ ಮಾಡಿದ ದಿಟ್ಟ ನಾಯಕ, ಹಾಗಾಗಿಯೇ ಅವರನ್ನು ಭಾರತದ ಜನತೆ ಪ್ರೀತಿಯಿಂದ ಜೆ ಪಿ ಎಂದು ಕರೆದರು. ಸ್ವಾತಂತ್ರ ಚಳುವಳಿಯಲ್ಲಿ ಪಾತ್ರವಹಿಸಿದ ಇವರು ಮಹಾತ್ಮ ಗಾಂಧಿ ಮತ್ತು ಎಂ.ಎನ್ ರಾಯ್ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಗಾಂಧಿಯವರ ಹಾದಿಯಲ್ಲಿ ನಡೆದು ಇತಿಹಾಸವನ್ನೇ ಸೃಷ್ಟಿಸಿದ ಅಪರೂಪದ ನಾಯಕ.